ರಂಗಪ್ರವೇಶದಲ್ಲಿ ಮಿಂಚಿದ ರಚನಾ ಮತ್ತು ರೂಹಿ

8687_10200883968368379_768927495_nಭಾರತೀಯರು ಅಮೇರಿಕಾದಲ್ಲಿದ್ದರೂ ಭರತನಾಟ್ಯ ತಮ್ಮ ಮಣ್ಣಿನದ್ದು ಎಂಬ ಅಭಿಮಾನ ಇಟ್ಟುಕೊಂಡೇ ಅಧ್ಯಯನ ಮಾಡುತ್ತಾರೆ ಎಂಬುದಕ್ಕೆ ರಚನಾ ಪ್ರಸಾದ್ ಹಾಗೂ ರೂಹಿ ಪ್ರಸಾದ್ ಎಂಬ ಅಕ್ಕತಂಗಿಯರು ರವೀಂದ್ರ ಕಾಲಾಕ್ಷೇತ್ರದಲ್ಲಿ ತನ್ಮಯತೆಯಿಂದ ನೀಡಿದ ಪ್ರದರ್ಶನವೇ ಸಾಕ್ಷಿ. ಕಲಾಶ್ರೀ ಆಶಾಗೋಪಾಲ್ ಕಳೆದ ಮೂರು ದಶಕಗಳ ಹಿಂದೆ ಫೀನಿಕ್ಸ್‍ನಲ್ಲಿ ಪ್ರಾರಂಭ ಮಾಡಿದ ಆರತಿ ಸ್ಕೂಲ್ ಆಫ್ ಇಂಡಿಯನ್ ಡ್ಯಾನ್ಸಸ್‍ನಲ್ಲಿ ಆರು ವರ್ಷಗಳ ಕಾಲ ಅಭ್ಯಾಸ ನಡೆಸಿ, ಬಳಿಕ ಭಾರತದಲ್ಲಿ ನೆಲೆಗೊಳ್ಳುವ ತೀರ್ಮಾನ ನಿಮಿತ್ತವಾಗಿ ಬೆಂಗಳೂರಿನ ಕಲಾಶ್ರೀ ವೀಣಾಮೂರ್ತಿ ಅವರ ರಾಜರಾಜೇಶ್ವರಿ ಕಲಾನಿಕೇತನದಲ್ಲಿ ಅಭ್ಯಾಸ ಮುಂದುವರಿಸಿದರು. ರಂಗಪ್ರವೇಶದ ಸಂದರ್ಭದಲ್ಲಿ ಇಬ್ಬರು ಕಲಾಗುರುಗಳೂ ಸೇರಿಕೊಂಡು ನೀಡಿದ ಕಠಿಣ ತರಬೇತಿ ನಿಮಿತ್ತವಾಗಿ ರಂಗಪ್ರವೇಶವು ಅಭೂತಪೂರ್ವ ಯಶಸ್ಸನ್ನು ಕಂಡಿತು.

ಇಡಿಯ ವೇದಿಕೆಯು ಕಂಬಗಳಿಂದ ಕೂಡಿ ಬೇಲೂರಿನ ಶಿಲ್ಪವೈಭವವನ್ನು ನೆನಪಿಸುವಂತಿತ್ತು. ಹಿನ್ನೆಲೆಯಲ್ಲಿ ಪ್ರತಿ ನೃತ್ಯದ ಪ್ರಾರಂಭಕ್ಕೂ ಶ್ವೇತ ಪರದೆಯ ಮೇಲೆ ಆಯಾ ನೃತ್ಯಕ್ಕೆ ಕಾರಣೀಭೂತ ದೇವತೆಗಳು ಮಿಂಚಿ ಮರೆಯಾಗುತ್ತಿದ್ದುದೊಂದು ಅಪೂರ್ವ ತಂತ್ರಗಾರಿಕೆ.
ಗಣೇಶ ಪ್ರಸಾದ ಹಾಗೂ ಮಮತಾ ಪ್ರಸಾದರ ಪುತ್ರಿಯರಾದ ರಚನಾ ಹಾಗೂ ರೂಹಿ ತರಗತಿಯಲ್ಲಿ ಪ್ರಥಮ ಸ್ಥಾನದಲ್ಲಿದ್ದಂತೆಯೇ ಭರತನಾಟ್ಯದಲ್ಲೂ ಆ ಗುಣಮಟ್ಟವನ್ನು ಕಾಯ್ದುಕೊಂಡಿದ್ದರು. ಸುಮಾರು ಎರಡೂವರೆ ಗಂಟೆಗಳ ಕಾಲ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ ಮಕ್ಕಳಿಬ್ಬರು ಪ್ರದರ್ಶಸಿದ ದೀಪಾಂಜಲಿಯಂತೂ ಕಣ್ಣಿಗೆ ಹಬ್ಬವೇ ಆಗಿತ್ತು. ಪುಷ್ಪಾಂಜಲಿಯಿಂದ ತೊಡಗಿ ತಿಲ್ಲಾನದವರೆಗೆ ಪ್ರತಿ ಹಂತದಲ್ಲೂ ಶಾಸ್ತ್ರೀಯತೆಯ ಗಂಧಕ್ಕೆ ಕಿಂಚಿತ್ತೂ ಊನ ಒದಗಲಿಲ್ಲ. ಮನೋಧರ್ಮ ಪ್ರದರ್ಶಿಸುವುದಕ್ಕೆ ವಯಸ್ಸೊಂದು ಮಾನದಂಡವಲ್ಲ ಎಂಬುದನ್ನು ರಚನಾ ಹಾಗೂ ರೂಹಿ ಸಾಬೀತು ಪಡಿಸಿದರು.
ನಾ. ದಾಮೋದರ ಶೆಟ್ಟಿ.

Advertisements
ಬದಿಗೆ | Posted on by | ನಿಮ್ಮ ಟಿಪ್ಪಣಿ ಬರೆಯಿರಿ

ದಡ್ಡರೇ ನಮ್ಮವರು?

33

ಚಿಕ್ಕಂದಿನಿಂದಲೇ ಸವರ್ಣೀಯರ ಅಕ್ಕಪಕ್ಕದಲ್ಲಿ ಬಳೆದು ಅವರ ಮನೆಯ ಹಿಂದಣ ಜಗಲಿಯಲ್ಲಿ ಕುಳಿತು ಊಟಮಾಡಿ ಸೆಗಣಿ ಸಾರಿಸಿ ಆ ಜಾಗವನ್ನು ಶುದ್ಧಿಗೊಳಿಸಿದ ಅನುಭವ ಬೇಕಾದಷ್ಟಿದೆ. ದೇವಾಲಯದಲ್ಲಿ ಒಳಗಡೆ ಊಟಮಾಡುವವರ ಸರದಿ ಮುಗಿಯುವವರೆಗೆ ಕಾದು ಆ ಬಳಿಕವೂ ಹೊರಗೆ ಕುಳಿತೇ ಊಟಮಾಡಿದ್ದು ಅನೇಕ ಸಾರಿ. ಅದೆಲ್ಲ ಆ ಕಾಲವಾಯಿತು ಎಂದುಕೊಂಡರೆ ಕಳೆದವಾರ ಮಂಗಳೂರಿನ ಛತ್ರವೊಂದರಲ್ಲಿ ಗೆಳೆಯರೊಬ್ಬರ ಮೊಮ್ಮಗುವಿನ ನಾಮಕರಣಕ್ಕೆಂದು ಹೋಗಿದ್ದು ಊಟಕ್ಕೆ ಕುಳಿತುಕೊಳ್ಳಲು ಹೋದರೆ ಅಲ್ಲೊಂದು ಫಲಕ: ‘ದ್ವಾರಕಾ ಛತ್ರದಲ್ಲಿ ಗಂಡಸರು ಊಟಮಾಡುವಾಗ ದಯವಿಟ್ಟು ಅಂಗಿ ತೆಗೆಯಬೇಕಾಗಿ ವಿನಂತಿ.’ 

ಅಂಗಿ ತೆಗೆದರೂ ಜನಿವಾರವಿಲ್ಲದೆ ಊಟ ಸಿಗಲಾರದೆಂಬುದು ನನಗೆ ಮನವರಿಕೆಯಾಗಿತ್ತು. ಜಾಣ ಬ್ರಾಹ್ಮಣ ಗೆಳೆಯರೊಬ್ಬರು ಹೊರಗೆ ಚಪ್ಪರದಲ್ಲಿ ನನ್ನೊಂದಿಗೆ ಕುಳಿತು ಊಟಮಾಡಿ ಆಗಬಹುದಾಗಿದ್ದ ಮುಜುಗರವನ್ನು ತಪ್ಪಿಸಿದರು. ಕೇರಳ ಹಾಗೂ ದಕ್ಷಿಣ ಕರಾವಳಿ ಜಿಲ್ಲೆಗಳ ದೇವಾಲಯಗಳಲ್ಲಿ ಗಂಡಸರು ಬಟ್ಟೆ ಕಳಚಿ ಒಳಪ್ರವೇಶಿಸಬೇಕೆಂಬ ನಿಯಮದ ಹಿಂದೆ ಇರುವ ಜನಿವಾರದ ಗುಟ್ಟನ್ನು ಛತ್ರಕ್ಕೂ ತಂದುದು ತೀರ ಅವಹೇಳನಕಾರಿ.
ಗಂಡಸರಷ್ಟೆ ಬಟ್ಟೆ ಕಳಚಬೇಕು ಯಾಕೆ? ಎಂಬ ಪ್ರಶ್ನೆಗೆ ಉತ್ತರಿಸಲಾಗದೆ ಕೆಲವು ದೇವಾಲಯಗಳಲ್ಲಿ ಹೆಂಗಸರು ಚೂಡಿದಾರ್ ಧರಿಸಿ ಒಳಪ್ರವೇಶಿಸಬಾರದು ಎಂಬ ಕಾನೂನು ತಂದಿದ್ದಾರೆ. ಇಂತಹ ಅತಿಜಾಣತನದಿಂದಲಾಗಿ ದೇವಾಲಯಗಳು ಬೆವರುವಾಸನೆಯ ತಾಣವಾಗಿ ಮತ್ತಷ್ಟು ಮಲಿನಗೊಳ್ಳುತ್ತದೆ ಎಂಬುದನ್ನು ಅರಿಯದಷ್ಟು ದಡ್ಡರೇ ನಮ್ಮವರು?

ಬದಿಗೆ | Posted on by | ನಿಮ್ಮ ಟಿಪ್ಪಣಿ ಬರೆಯಿರಿ

ದೀಪಾವಳಿ

               

INDIAN GIRL LIGHTS A DEEPAWALI LAMP IN AHMEDABAD

ಮನುಷ್ಯರ ಪರಸ್ಪರ ಸಂಬಂಧವನ್ನು ಬೆಳಗಿಸುವ, ಗಾಢಗೊಳಿಸುವ ಹಬ್ಬವೇ ದೀಪಾವಳಿ ಹಬ್ಬ. ಇದು ದೀಪದಿಂದ ದೀಪವನ್ನು ಬೆಳಗಿಸುವ ಹಬ್ಬ. ಇಲ್ಲಿ ದೀಪವೆಂಬುದು ಒಂದು ಸಂಕೇತ. ನಿಜವೆಂದರೆ ಒಬ್ಬೊಬ್ಬ ಮನುಷ್ಯನೂ ಒಂದೊಂದು ದೀಪವೆ. ಒಬ್ಬೊಬ್ಬನೂ ಇನ್ನೊಬ್ಬನ ಬದುಕನ್ನು ಅರಳಿಸಬೇಕು ಎಂಬ ಮಹತ್ತರವಾದ ಆಶಯ ಇಲ್ಲಿದೆ. 

ಭಾರತೀಯ ಸಮಾಜದಲ್ಲಿ ದೀಪಾವಳಿಹಬ್ಬಕ್ಕೆ ಹೆಚ್ಚಿನ ಮಹತ್ವವಿದೆ. ಇಲ್ಲಿ ವಿವಿಧ ಜಾತಿ, ವಿವಿಧ ಮತದವರು ವಾಸಿಸುತ್ತಾರೆ. ಎಲ್ಲರೂ ಭಾರತಮಾತೆಯ ಮಕ್ಕಳೆ.

ಆಕೆಗೆ ಎಲ್ಲ ಮಕ್ಕಳೂ ಒಂದೆ. ಪ್ರತಿಯೊಬ್ಬರೂ ಒಂದೇ ರೀತಿಯಲ್ಲಿ ಬಾಳಿ ಬೆಳಗಬೇಕು, ಒಬ್ಬನಿಂದ ಮತ್ತೊಬ್ಬ ಉತ್ತೇಜನಗೊಳ್ಳಬೇಕು ಎಂಬ ಮಹತ್ವದ ಸಂದೇಶವೂ ಇದರಲ್ಲಿ ಅಡಕವಾಗಿದೆ. 

ದೀಪಾವಳಿ ಎಂದರೆ ‘ದೀಪದ ಸಮೂಹ’ ಅಥವಾ ‘ದೀಪದ ಸಾಲು’ ಎಂದರ್ಥ. ಸಾಲು ಸಾಲು ದೀಪಗಳು ಸೇರಿದಾಗ ಅಲ್ಲೊಂದು ಬೆಳಕಿನ ಹಬ್ಬ ನಿರ್ಮಾಣವಾಗುತ್ತದೆ. ಯಾವಾಗ ಬೆಳಕು ತುಂಬಿಕೊಳ್ಳುತ್ತದೋ ಆಗ ಕತ್ತಲೆ ಮಾಯವಾಗುತ್ತದೆ. ಇದನ್ನೇ ದಾರ್ಶನಿಕರು ‘ತಮಸೋಮಾ ಜ್ಯೋತಿರ್ಗಮಯ’ ಎಂದದ್ದು. ಬದುಕಿನ ಕತ್ತಲೆಯೆಲ್ಲ ಮಾಯವಾಗಿ ಬೆಳಕು ತುಂಬಲಿ ಎಂಬುದು ಈ ಮಾತಿನ ಸಾರವಾಗಿದೆ.
ಹಾಗೆ ನೋಡಿದರೆ ಹಬ್ಬಗಳಿರುವುದೇ ಒಂದರ್ಥದಲ್ಲಿ ದೂರದ ಊರುಗಳಲ್ಲಿ ಉದ್ಯೋಗದಲ್ಲಿಯೋ ಇತರ ಸಾಂಸಾರಿಕ ಕೆಲಸಗಳಲ್ಲಿಯೋ ತೊಡಗಿಕೊಂಡವರು ಒಂದು ಸೇರುವುದಕ್ಕೆ. ತಮ್ಮ ಕುಟುಂದ ಸಕಲ ಸದಸ್ಯರನ್ನು, ಊರ ಗೆÀಳೆಯರನ್ನು ಭೆüೀಟಿ ಮಾಡುವುದಕ್ಕೆ, ಸುಖ-ದುಃಖ ಹಂಚಿಕೊಳ್ಳಲಿಕ್ಕಿರುವುದೇ ಈ ಹಬ್ಬ. ಜೊತೆಗೆ ದೈವೀಕ ನಂಬಿಕೆಗಳೂ ಥಳಕು ಹಾಕಿಕೊಂಡಿರುವುದರಿಂದ ಹಬ್ಬಕ್ಕೆ ಆಧ್ಯಾತ್ಮಿಕ ಶಕ್ತಿಯೂ ಒದಗಿಬರುತ್ತದೆ. ಹಾಗೆ ಎಲ್ಲರೂ ಒಂದಾಗಿ ಸುಖದುಃಖ ಹಂಚಿಕೊಂಡು, ನೋವನ್ನು ಮರೆತು ನಲಿವನ್ನು ಅಳವಡಿಸಿಕೊಂಡು ಹಬ್ಬವನ್ನು ಅರ್ಥವತ್ತಾಗಿ ಆಚರಿಸಬೇಕು.
ಈಡಿeeಜom, ಜಿesಣiviಣಥಿ ಚಿಟಿಜ ಜಿಡಿieಟಿಜಟiಟಿess -ಈ ಮೂರು ಅಂಶಗಳು ದೀಪಾವಳಿಯ ಆಶಯ ಎನ್ನಬಹುದು. ದುಷ್ಟ ಶಕ್ತಿಯನ್ನು ನಾಶಪಡಿಸಿ ನಾಡಿಗೆ ಸ್ವಾತಂತ್ರ್ಯವನ್ನು ತಂದುಕೊಟ್ಟ ದೇವತೆಗಳನ್ನು ಧ್ಯಾನಿಸುವ ಸ್ಥಿತಿ ಒಂದು ಕಡೆಯಾದರೆ, ಎಲ್ಲರೂ ಒಂದಾಗಿ ಹಬ್ಬವನ್ನಾಚರಿಸುತ್ತಾ ಪಟಾಕಿ ಸಿಡಿಸಿ, ಸಿಹಿತಿಂಡಿ ಹಂಚಿತಿಂದು ಸಂಭ್ರಮ ಪಡುವುದು ಇನ್ನೊಂದು ಕಡೆ. ಎಲ್ಲರ ಮನೆಯಲ್ಲೂ ಗೆಳತನ, ಆತ್ಮೀಯತೆ ತುಂಬಿ ತುಳುಕುವಂತಾಗಬೇಕು ಎಂಬ ಆಶಯ ಮೂರನೆಯದ್ದು.
ರಾಷ್ಟ್ರೀಯ ಭಾವೈಕ್ಯದ ಸಂಕೇತವಾಗಿಯೂ ಇಂಥ ಹಬ್ಬಗಳನ್ನು ಪರಿಗಣಿಸಬೇಕು. ಬೆಳಕಿನ ಹಬ್ಬವು ಎಲ್ಲರಿಗೂ ಶುಭವನ್ನು ತರಲಿ ಎಂದು ಪ್ರಾರ್ಥಿಸುತ್ತೇನೆ.

ಬದಿಗೆ | Posted on by | ನಿಮ್ಮ ಟಿಪ್ಪಣಿ ಬರೆಯಿರಿ

ನನ್ನ ವೆಬ್ಸೈಟ್

http://www.naada.co.nr/

Welcome-to-my-website1

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ

ಸೃಜನಶೀಲ ಸಾಹಿತ್ಯ ಮತ್ತು ಬೋಧನೆ – ಡಾ.ನಾ.ದಾಮೋದರ ಶೆಟ್ಟಿ

ಮನುಷ್ಯನ ಭಾವನೆಗಳಿಗೆ ಸ್ವತಂತ್ರವಾದ ರೂಪುಕೊಡುವ ಕ್ರಿಯೆಯೇ ಸೃಜನಶೀಲ ಕ್ರಿಯೆ. ಅದು ಬರವಣಿಗೆಯ ಮೂಲಕ ಮೈದಾಳುತ್ತದೆ. ಕತೆ, ಕವನ, ಕಾದಂಬರಿ ಇತ್ಯಾದಿಗಳನ್ನೆಲ್ಲ ಸೃಜನಶೀಲ ಸಾಹಿತ್ಯದ ವಿವಿಧ ಪ್ರಕಾರಗಳೆಂದು ಪರಿಭಾವಿಸುತ್ತೇವೆ. ಹೆಚ್ಚಾಗಿ ಸಾಹಿತ್ಯದ ವಿದ್ಯಾರ್ಥಿಗಳೆನಿಸಿಕೊಂಡವರು ಇಂತಹ ಪ್ರಕ್ರಿಯೆಯ ಪಾಲುದಾರರು. ಅದರಲ್ಲೂ ಭಾಷೆ ಕಲಿಸುವ ಅಧ್ಯಾಪಕರ ಸುತ್ತಮುತ್ತ ಸೃಜನಶೀಲ ಸಾಹಿತ್ಯ ಓಡಾಡುವುದನ್ನು ಮನಗಾಣಬಹುದು.

ಸಾಹಿತ್ಯೇತರ ಅಧ್ಯಾಪಕರ ಸಮೂಹ ಸಂಖ್ಯೆಯಲ್ಲಿ ಬೃಹತ್ತಾಗಿರುತ್ತದೆ. ಅವರು ಸಾಮಾನ್ಯವಾಗಿ ತಿಳಿದುಕೊಳ್ಳುವುದೇನೆಂದರೆ ಸಾಹಿತ್ಯರಚನೆ ಎಂಬುದು ಭಾಷಾ ಅಧ್ಯಾಪಕರ ಕೆಲಸ. ನಮಗೂ ಅದಕ್ಕೂ ಸಂಬಂಧವಿಲ್ಲ ಎಂದು. ಎಷ್ಟೋ ಸಾಹಿತ್ಯೇತರ ವಿಷಯಗಳನ್ನು ಪಾಠಮಾಡುವ ಅಧ್ಯಾಪಕರು ತಮ್ಮ ಕಾಲೇಜುಗಳಲ್ಲಿ ನಡೆಯುವ ತಮ್ಮದೇ ವಿದ್ಯಾರ್ಥಿಗಳ ನಾಟಕ, ಕಾವ್ಯಗಾಯನ, ಭಾಷಣ ಸ್ಪರ್ಧೆ,ಹಾಗೂ ಇತರ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುತ್ತಿದ್ದರೆ ಕ್ಯಾಂಟಿನ್‍ನಲ್ಲಿ ಕುಳಿತು ಚಹಾ ಹೀರುವರೇ ಹೊರತು ಮಕ್ಕಳ ಕಾರ್ಯಕ್ರಮ ನೋಡಬರುವುದಿಲ್ಲ.

ಹೆಚ್ಚಿನ ಸಾಹಿತ್ಯೇತರ ಅಧ್ಯಾಪಕರು ಯಾಕೆ ಸಾಹಿತ್ಯವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂಬುದನ್ನು ಕುರಿತು ತುಸು ಚಿಂತನೆ ನಡೆಸಬಹುದಾಗಿದೆ: ಸಾಹಿತ್ಯದ ಓದಿನಿಂದ ತಾವು ಕಲಿಸುವ ವಿಷಯಗಳಿಗೆ ಯಾವುದೇ ಬಗೆಯ ಪ್ರಯೋಜನ ಒದಗುವುದಿಲ್ಲ;ಸಾಹಿತ್ಯದ ವಾಸನೆ ಇಲ್ಲದೆಯೇ ಕೆಮಿಸ್ಟರಿ ಕಲಿಸಬಲ್ಲೆ , ಫಿಸಿಕ್ಸ್‍ಗೆ ಸಾಹಿತ್ಯ ಯಾಕೆ? ಲೆಕ್ಕವನ್ನು ಸಾಹಿತ್ಯದಲ್ಲಿ ಕಲಿಸುವುದು ಹೇಗೆ? ಕಾಮರ್ಸ್ ವಿದ್ಯಾರ್ಥಿಗಳಿಗೆ ಭಾಷೆಯೇ ಬೇಡ; ವಾರದಲ್ಲಿ ನಾಲ್ಕು ಗಂಟೆ ಭಾಷೆಯ ಹೆಸರಿನಲ್ಲಿ ವ್ಯರ್ಥಮಾಡಲಾಗುತ್ತದೆ; ಬದಲಿಗೆ ಕಾಮರ್ಸ್‍ಗೇ ಆಸಮಯವನ್ನೂ ಬಳಸಿದರೆ ವಿದ್ಯರ್ಥಿಗಳಿಗೆ ಹೆಚ್ಚಿನ ಲಾಭವಾಗುತ್ತದೆ….ಹೀಗೆಲ್ಲ ಮಾತನಾಡುವ ಎಷ್ಟೋ ಅಧ್ಯಾಪಕರು ನಮ್ಮ ನಡುವೆ ಇದ್ದಾರೆ. ಅವರು ತಮ್ಮ ವಿಷಯದ ಸಮರ್ಥನೆಗಾಗಿ ಆಡುವ ಮಾತುಗಳಲ್ಲೇ ಎಷ್ಟೋ ವ್ಯಾಕರಣ ದೋಷಗಳಿರುತ್ತವೆ. ಹಾಗಂತ ನೀವಿ ಪ್ರಶ್ನಿಸಿದಿರೋ ‘ ವಿಷಯದ ಸಂವಹನೆಗೆ ವ್ಯಾಕರಣ ಮುಖ್ಯವಲ್ಲ. ಅದು ಸಂವಹನವಾದರೆ ಮುಗಿಯಿತು’ ಎಂದುಬಿಡುತ್ತಾರೆ.

ನಿಜವೆಂದರೆ ಭಾಷಾ ಅಧ್ಯಾಪಕರು ಅಥವಾ ಭಾಷೆಯನ್ನು ಸಾಹಿತ್ಯ ರೂಪದಲ್ಲಿ ಕಲಿಯುವವರು ಓದುವ ಹಾಗೆ ಇತರರು ಓದುವುದಿಲ್ಲ. ಅನೇಕರು ವರ್ತಮಾನ ಪತ್ರಿಕೆಗೆ ತಮ್ಮ ಓದನ್ನು ಸೀಮಿತಗೊಳಿಸಿ ಇಟ್ಟುಕೊಂಡಿರುತ್ತಾರೆ. ಶಬ್ದಭಂಡಾರ ಬೆಳೆಸುವುದಕ್ಕೆ ಇರುವ ಅವಕಾಶವನ್ನು ಬಳಸಿಕೊಳ್ಳುವುದಿಲ್ಲ.ಅವರು ಚೆನ್ನಾಗಿಯೇ ಪಾಠಮಾಡುತ್ತಾರೆ. ಆ ಬಗ್ಗೆ ತರ್ಕವಿಲ್ಲ. ತರ್ಕವಿರುವುದು ಅವರಲ್ಲಿ ಪಾಠಕ್ಕೆ ಬೇಕಾದ ಶಬ್ದಭಂಡಾರವಷ್ಟೇ ಇರುತ್ತದೆ. ವಿಷಯಮೀರಿ ಹೊರಟಾಗ ಬೇಸ್ತುಬೀಳುತ್ತಾರೆ. ತಮ್ಮಲ್ಲಿ ಎಷ್ಟೋವೇಳೆ ವಿಷಯದ ಭಂಡಾರ ಇರುತ್ತದೆ: ಅದನ್ನು ಸಂವಹನಗೊಳಿಸುವುದಕ್ಕೆ ಬೇಕಾದ ಶಬ್ದಭಂಡಾರವೇ ಇರುವುದಿಲ್ಲ.ಅದಾಗಲೇ ಸಿದ್ಧಗೊಂಡಿರುವ ವಿವರವನ್ನೋ ಥಿಯರಿಯನ್ನೋ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವಲ್ಲಿ ಸೃಜನಶೀಲತೆಯೆಲ್ಲಿ ಬಂತು? ಮತ್ತು ಅಂಥ ಪಠ್ಯಗಳಿಗೆ ಸಾಹಿತ್ಯದ ಸಿಂಚನದ ಅಗತ್ಯವಿರುವುದಿಲ್ಲ ಎಂಬ ಭಾವನೆ ಅಂಥ ಅಧ್ಯಾಪಕರಲ್ಲಿ ಢಾಳಾಗಿ ಇದೆ. ಸಾಹಿತ್ಯದ ಶಕ್ತಿಯನ್ನು ಬಳಕೆಮಾಡಿ ವ್ಯತ್ಯಸ್ತ ರೂಪದಲ್ಲಿ ಹೇಳುವುದು ಸಾಧ್ಯವಾದರೆ ಅದೇ ಪಠ್ಯ ಇನ್ನಷ್ಟು ಚೆನ್ನಾಗಿ ವಿದ್ಯಾರ್ಥಿಗಳ ಮರ್ಮಕ್ಕೆ ನಾಟಬಹುದಲ್ಲವೆ? ಹಾಗೆ ಗೆದ್ದ ಕೆಲವು ಅಧ್ಯಾಪಕರನ್ನು ಗಮನದಲ್ಲಿಟ್ಟುಕೊಂಡೇ ಈ ಮಾತನ್ನು ಹೇಳುತ್ತಿರುವುದು.

ಗಣಿತ, ವಿಜ್ಞಾನ ಪಾಠಮಾಡುವವರು ಸಾಹಿತಿಗಳೂ ಅಥವಾ ಒಳ್ಳೆಯ ಓದುಗರೂ ಆದರೆ ಅವರಲ್ಲಿ ಒಬ್ಬ ಜಿ.ಟಿ.ನಾರಾಯಣರಾಯರೋ ಒಬ್ಬ ಜೆ.ಆರ್.ಲಕ್ಷ್ಮಣರಾಯರೋ ತಲೆಯೆತ್ತಿ ನಿಲ್ಲಬಹುದು. ಹಾಗಾಗದೆ ಅವರು ಸೃಜನಶಿಲತೆಯನ್ನು ಕಡೆಗಣಿಸಿದರೆ ತಮ್ಮ ಪಾಠವನ್ನು ತಮಗೇ ಹೇಳಿಕೊಳ್ಳಬೇಕಾಗಬಹುದು. ಈಮಾತುಗಳಿಗೆ ಅಪವಾದಗಳಿವೆ ಎನ್ನುವುದನ್ನು ಹೇಳುವುದಕ್ಕಾಗಿಯೇ ಇಬ್ಬರು ವಿಜ್ಞಾನ ಸಾಹಿತಿಗಳ ಹೆಸರನ್ನು ಉಲ್ಲೇಖಿಸಿದ್ದು.

ಒಟ್ಟಿನಲ್ಲಿ ವಿಷಯ ಕಲಿಕೆಯಷ್ಟೇ ಭಾಷೆಯ ಕಲಿಕೆಗೂ ಆದ್ಯತೆ ನೀಡಬೇಕು. ಹಾಗೆ ಮಾಡುವುದು ವಿದ್ಯಾರ್ಥಿಯ ಹಾಗೂ ಅಧ್ಯಾಪಕರಿಬ್ಬರ ದೃಷ್ಟಿಯಲ್ಲೂ ಅಗತ್ಯ. ಹೆಚ್ಚುಹೆಚ್ಚು ಸಾಹಿತ್ಯ ಕೃತಿಗಳನ್ನು ಓದಿದರೆ ಹೆಚ್ಚುಹೆಚ್ಚು ಸೃಜನಶೀಲರಾಗುವುದು ಸಾಧ್ಯ. ಹೆಚ್ಚು ಶಬ್ದಭಂಡಾರ ಕೈಸೇರುವುದು ಸಾಧ್ಯ. ಹೆಚ್ಚು ಶಬ್ದಭಂಡಾರ ಕೈಸೇರಿದರೆ ಹೆಚ್ಚು ಮಾತಾಡಲು, ಹೆಚ್ಚು ಬರೆಯಲು ಸಾಧ್ಯ, ಹೆಚ್ಚು ಮಾತಾಡಲು ಹೆಚ್ಚು ಬರೆಯಲು ಸಾಧ್ಯವಾಯಿತೆಂದರೆ ಸೃಜನಶೀಲತೆ ನಿಮ್ಮ ಸಂಗಾತಿಯಾಯಿತೆಂದು ಅರ್ಥ.

ಬದಿಗೆ | Posted on by | ನಿಮ್ಮ ಟಿಪ್ಪಣಿ ಬರೆಯಿರಿ

ನಾಗತಿಹಳ್ಳಿ ಚಂದ್ರಶೇಖರ್ ಅವರ ‘ಬ್ರೇಕಿಂಗ್ ನ್ಯೂಸ್’ಚಿತ್ರಕ್ಕೆ ಬರೆದ ಹಾಡು

Breaking_News_(Kannada)_film_poster

ಹಳ್ಳಿಯ ಹಸಿ ಬೆಣ್ಣೆಮುದ್ದೆ| ನಗರದ ಬಿಸಿ ತುಪ್ಪ ಬಿದ್ದು

ಚೂರಾಯಿತೆ? ಕರಗಿ ನೀರಾಯಿತೆ?
ಹಳ್ಳಿಬಿಡಲು ಕಂಡ ಕನಸು| ನಗರದ ಬಿರುಬಿಸಿಲ ಬಿರುಸು
ಉರಿಯಾಯಿತೆ? ಮನಸು ಮುರಿದ್ಹೋಯಿತೆ?

ಸತ್ಯವೆಂದು ಸುಳ್ಳಬೆಸೆದು| ನಂಬಿಸಿದರೆ ನಂಬರೆ?
ಸತ್ಯವನ್ನೆ ಸತ್ಯವೆಂದು| ಸಾರಿದವರು ಸೋತರೆ?
ಸೋತು ಸುಣ್ಣವಾದರೆ?

ಅಸಹಾಯಕನಾಗಿ ನಿಂತ | ನಾ ಲಗೋರಿ ಕಟ್ಟಲೆ?
ಎಡಬಲದಲಿ ದಡಬಡಿಸಿದ| ಚೆಂಡಿಗೆದೆಯನೊಡ್ಡಲೆ?
ಒಡ್ಡಿ ಕುಸಿದು ಸಾಯಲೆ?

ತಿರುಗಿ ಬೀಳಲೇನು ಬೇಕು?| ಬಲೆಯನೊಡ್ಡಿ ಹಿಡಿಯಬೇಕು
ನಾ ಬಲೆಯನು ಒಡ್ಡಲೆ?| ಒಡ್ಡಿ ಮೀನ ಹಿಡಿಯಲೆ?
ಹಿಡಿದು ದಡಕೆ ಎಸೆಯಲೆ?

ಬದಿಗೆ | Posted on by | ನಿಮ್ಮ ಟಿಪ್ಪಣಿ ಬರೆಯಿರಿ

ಕರಕಷ್ಟಕಣಾ ಗ್ರಂಥಪಾಲ

ಕರ್ನಾಟಕದಲ್ಲಿ ಏನಿಲ್ಲವೆಂದರೂ ವರ್ಷಕ್ಕೆ ಕನಿಷ್ಟ 3000ಕ್ಕೂ ಅಧಿಕ ಪುಸ್ತಕಗಳು ಪ್ರಕಟವಾಗುತ್ತವೆ. ಯಾವುದೇ ಬರಹಗಾರ ತಾನು ಕೃತಿರಚನೆಗೆ ತೊಡಗುವುದರ ಹಿನ್ನೆಲೆಯಲ್ಲಿ ಒಂದು ಉದ್ದೇಶವಿರುತ್ತದೆ. ಜಿ ಎಸ್ ಎಸ್ ‘ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ’ಎಂದದ್ದರ ಹಿನ್ನೆಲೆಯಲ್ಲಿ ಅದನ್ನೊಂದು ‘ಭಾವಗೀತೆ’ಯನ್ನಾಗಿಯಷ್ಟೇ ಪರಿಗ್ರಹಿಸಬೇಕು. ಆದರೆ ಕೃತಿಯೊಂದನ್ನು ಪ್ರಕಟಿಸಿ ಅದನ್ನು ಗಂಟುಕಟ್ಟಿ ಅಟ್ಟದಲ್ಲಿರಿಸಬೇಕೆಂಬ ಉದ್ದೇಶ ಯಾರಿಗೂ ಇರುವುದಿಲ್ಲ. ಕೃತಿಯೊಂದರ ಸಿದ್ಧತೆಯಲ್ಲಿ ಲೇಖಕ ವಹಿಸುವ ಶ್ರಮ, ವ್ಯಯಿಸುವ ಸಮಯ ಎಲ್ಲವೂ ಮೌಲ್ಯಯುತವಾದದ್ದೆ. 

ಲೇಖಕ ತನ್ನ ಕೃತಿಯನ್ನು ತಾನೇ ಪ್ರಕಟಪಡಿಸುವ ಕಾಲವೊಂದಿತ್ತು. ಆಗ ಆತ ದುಡ್ಡಿನ ವ್ಯವಹಾರವನ್ನು ಮೂರು ಪಾಲು ಮಾಡಿಕೊಂಡು ನಿಭಾಯಿಸುತ್ತಿದ್ದ. 33% ಪ್ರಕಾಶನಕ್ಕೆ, 33% ಪುಸ್ತಕ ವ್ಯಾಪಾರಿಗೆ ಹಾಗೂ 33% ತನಗೆ. ಅಂಥದ್ದರಲ್ಲಿ ಕೆಲವು ವ್ಯಾಪಾರಿಗಳು 50% ತಮಗೆ ಕೊಡಬೇಕೆಂದು ಪಟ್ಟು ಹಿಡಿದು ವಾದಿಸಿ ಪಡೆದುಕೊಳ್ಳುತ್ತಿದ್ದರು. ಆಗ ಆಗುವ ನಷ್ಟವನ್ನು ಬರಹಗಾರ ಸಹಿಸಿಕೊಳ್ಳಬೇಕು.
ಈಗ ಪ್ರಕಾಶಕರು ಬೇಕಾದಷ್ಟು ಸಂಖ್ಯೆಯಲ್ಲಿದ್ದಾರೆ, ಪ್ರಕಾಶನವನ್ನು ಒಂದು ದಂಧೆಯನ್ನಾಗಿ ಮಾಡಿಕೊಂಡವರು ಹಲವರಿದ್ದಾರೆ. ಇಲ್ಲಿ 33%ದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಕೆಲವು ಬರಹಗಾರರು ತಾವು ಬರೆದಿಟ್ಟದ್ದು ಇದೆಯಲ್ಲ: ಅದನ್ನು ತಾವೇ ಪ್ರಕಟಿಸಬೇಕಾದರೆ ತುಂಬ ಒದ್ದಾಟವಿದೆ. ಬದಲಿಗೆ ಯಾರಾದರೂ ಪ್ರಕಾಶಕರು ಸಿಕ್ಕಿದರೆ ಅವರೇನು ಕೊಡದಿದ್ದರೂ ಪರವಾಗಿಲ್ಲ; ಪ್ರಕಟವಾಗುತ್ತದಲ್ಲ. ತನಗೆ ಸ್ವಲ್ಪ ಕಾಂಪ್ಲಿಮೆಂಟರಿ ಕಾಪಿ ಸಿಕ್ಕರೆ ಸಾಕು. ಗೆಳೆಯರಿಗೆ ಮತ್ತು ಸಾದರ ಸ್ವೀಕಾರಕ್ಕೆ ಕೊಡೋದಕ್ಕೆ . ಉಳಿದಂತೆ ಪ್ರಕಾಶಕ ಏನು ಬೇಕಾದರೂ ಮಾಡಿಕೊಳ್ಳಲಿ. ಎಂಬ ಭಾವ ಹಲವರದು. ಇಂಥವರಿಂದಲೇ ಬಂದಿರೋದು ಕುತ್ತು ಬರಹಗಾರನಿಗೆ. ಒಳ್ಳೆಯ ಬರಹಗಾರರೆಂದು ಪ್ರಸಿದ್ಧಿ ಪಡೆದವರಿಗೆ ಕೆಲವು ಪ್ರಕಾಶಕರು 5ರಿಂದ 10ಶೇಕಡಾ ರಾಯಧನ ಕೊಡುವುದೂ ಇದೆ. ಭೈರಪ್ಪರಂಥ ಬರಹಗಾರರಿಗೆ 15%ಕ್ಕಿಂತ ಹೆಚ್ಚು ಸಿಗಬಹುದೇನೊ.
ಕೆಲ ವರ್ಷಗಳ ಹಿಂದೆ ಕೇರಳದ ಕೊಟ್ಟಾಯಂನ ನಾಷನಲ್ ಬುಕ್É ಸ್ಟಾಲ್ ಹಾಗೂ ಡಿ.ಸಿ. ಬುಕ್ಸ್‍ಗಳಿಗೆ ಭೇಟಿನೀಡಿದ್ದೆ. ಎರಡೂ ಬಹಳ ಪ್ರಸಿದ್ಧ ಪ್ರಕಾಶನ ಸಂಸ್ಥೆಗಳು. ಡಿ.ಸಿ.ಬುಕ್ಸ್‍ನ ಮಾಲಕರಾಗಿದ್ದ ಡಿ.ಸಿ. ಕಿಳಕ್ಕೇಮುರಿ ನನ್ನೆದುರಿಗೆ ಒಂದು ಪ್ರಶ್ನೆ ಎಸೆದರು: ‘ನಮ್ಮಲ್ಲಿ ಪ್ರಸಿದ್ಧ ಸಾಹಿತಿಗಳ ಕಾದಂಬರಿಗಳಿಗೆ 40%ದಿಂದ 45% ರಾಯಧನ ಕೊಡುತ್ತೇವೆ. ಸಾಮಾನ್ಯರಾದರೆ 20%ದಿದ 25%. ನಿಮ್ಮಲ್ಲಿ ಹೇಗಿದೆ?’
ನನಗೆ ನಿಜಕ್ಕೂ. ತಬ್ಬಿಬ್ಬು. ಹೇಗೆ ಹೇಳಲಿ ನಮ್ಮ ರಾಯಧನದ ಕಥೆ.
ಇತ್ತೀಚೆಗೆ ಕನ್ನಡದ ಪ್ರಸಿದ್ಧ ಪ್ರಕಾಶಕರೊಬ್ಬರನ್ನು ಕೇಳಿದೆ: ‘ ಹೇಗಿದೆ ಸದ್ಯದ ಪರಿಸ್ಥಿತಿ? ಇಷ್ಟೊಂದು ಪುಸ್ತಕಗಳು ಪ್ರಕಟವಾಗುತ್ತಿವೆಯಲ್ಲ. ಕೇರಳದ ಹಾಗೆ ಇಲ್ಲೂ ಸಾಹಿತಿಗಳು ಆರಾಮವಾಗಿ ಬರೆದೇ ಬದುಕಬಹುದಲ್ಲ?’
ಅದಕ್ಕೆ ಅವರು ‘ ಸಾಹಿತಿಗಳಿಗೆ ಏನು ಕೊಡೋದಕ್ಕೂ ನಮ್ಮ ಕೈಲಿ ಆಗೋದಿಲ್ಲ. ವ್ಯಾಪಾರಿಗಳು ಮುಖಬೆಲೆಯ 50% ಕೇಳ್ತಾರೆ. ಗ್ರಂಥಾಲಯ ನಿಗದಿ ಪಡಿಸಿದ ರೇಟಿನ ಶೇಕಡಾ 20ನ್ನು ಆಯಾ ಜಿಲ್ಲೆಯ ಗ್ರಂಥಪಾಲಕರಿಗೆ ಕೊಡಬೇಕು! ಪ್ರೆಸ್ ಬಿಲ್ ಕೊಟ್ಟಾದ ಮೇಲೆ ನಮ್ಮಲ್ಲಿ ಏನೂ ಉಳಿಯೋದಿಲ್ಲ . ಐದೋ ಹತ್ತೋ ಶೇಕಡಾ ಉಳಿದರೆ ಅದು ನಮ್ಮ ಓಡಾಟಕ್ಕೇ ಸಾಲಲ್ಲ, ಇನ್ನು ಲೇಖಕರಿಗೆ ಎಲ್ಲಿಂದ ಕೊಡೋಣ?ಲೇಖಕರಿಗೆ ಕೊಡಬೇಕಾದ ಹಣವನ್ನೇ ನಾವು ಗ್ರಂಥಪಾಲಕರಿಗೆ ಕೊಡ್ತಿರೋದು. ಗ್ರಂಥಪಾಲಕರಿಗೆ ಕೊಡದೇ ಹೋದ್ರೆ ಪುಸ್ತಕಗಳನ್ನು ಪ್ರಿಂಟುಮಾಡಿ ಮಡಗೋದೆಲ್ಲಿ?
ಪ್ರಿಯ ಓದುಗರೆ, ಹಾಗಾದರೆ ಕೇರಳದಲ್ಲಿ ಮುಖಬೆಲೆಯ 40% ಹೇಗೆ ಕೊಡುತ್ತಾರೆ? ಬರಹಗಾರರೆಂದರೆ ಬಿಟ್ಟಿ ದುಡಿಯುವ ಯಂತ್ರಗಳೆ? ಗ್ರಂಥಪಾಲಕರು ಇಷ್ಟೊಂದು ದುಡ್ಡು ಕಿತ್ತುಕೊಳ್ಳುವುದಾದರೆ ಅವರು ಲೇಖಕರ ಹೊಟ್ಟೆಗೆ ಹೊಡೆದೇ ಕಿತ್ತುಕೊಳ್ಳುತ್ತಿದ್ದಾರೆ. ಇಂಥವರ ಉದ್ಧಾರಕ್ಕಾಗಿ ಪುಸ್ತಕ ಬರೆಯುವ ಸ್ಥಿತಿ ಲೇಕಖನಿಗಾದರೂ ಯಾಕೆ ಬೇಕು?
ನಾದಾ.

ಬದಿಗೆ | Posted on by | ನಿಮ್ಮ ಟಿಪ್ಪಣಿ ಬರೆಯಿರಿ